ಸಾಮಾಜಿಕ ಹೋರಾಟಗಾರ, ಕಾಂಗ್ರೇಸ್ ಯುವ ನಾಯಕ, ಆರ್ ಟಿ ಐ ಕಾರ್ಯಕರ್ತ ಪದ್ಮನಾಭ ಸಾಮಂತ್ ಅನುಮಾನಾಸ್ಪದ ಸಾವು-ಆತ್ಮಹತ್ಯೆಯೇ? ಕೊಲೆಯೇ???. (ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)
ಬಂಟ್ವಾಳ: ಸಾಮಾಜಿಕ ಹೋರಾಟಗಾರ, ಕಾಂಗ್ರೇಸ್ ಯುವ ನಾಯಕ, ಆರ್ ಟಿ ಐ ಕಾರ್ಯಕರ್ತ ಪದ್ಮನಾಭ ಸಾಮಂತ್ ವಾಮದಪದವು ಅವರ ಮೃತದೇಹ ಭಾನುವಾರ ಬೆಳಿಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದೊಂದು ವ್ಯವಸ್ಥಿತ ಕೊಲೆಯೇ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ
ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮದ ವಾಮದಪದವು ತಿಮರಡ್ಡ ನಿವಾಸಿಗಳಾದ ಕೃಷ್ಣ ಸಾಮಂತ್ ಮತ್ತು ಗೌರಮ್ಮ ದಂಪತಿಗಳ ಪುತ್ರ ಪದ್ಮನಾಭ ಸಾಮಂತ್ ಎಂಬವರ ಮೃತದೇಹ ಮನೆ ಸಮೀಪದ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು ಈ ಬಗ್ಗೆ ತನಿಖೆಯಾಗಬೇಕು ಎಂದು ಮನೆಮಂದಿ ಸಹಿತ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪದ್ಮನಾಭ ಸಾಮಂತ್ ಗುರುವಾರ ಬಿ.ಸಿ.ರೋಡಿನಲ್ಲಿ ಕಾಂಗ್ರೇಸ್ ಸಭೆ ಮುಗಿಸಿ ಮನೆಗೆ ಬಂದಿದ್ದರು. ಮನೆಯಲ್ಲಿ ಹಿರಿಯ ವಯಸ್ಸಿನ ತಾಯಿಯೊಬ್ಬರು ಇದ್ದರು. ಸುಮಾರು 6.30 ರ ನಂತರ ಮನೆಯಿಂದ ತೆರಳಿದವರು ನಾಪತ್ತೆಯಾಗಿದ್ದರು. ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದೆ.
ಭಾನುವಾರ ಬೆಳಿಗ್ಗೆ ಅವರ ಮೃತದೇಹ ಮನೆ ಸಮೀಪದ ಗುಡ್ಡದಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಎಂದು ಹೇಳಲಾಗಿದ್ದರೂ ಮನೆಮಂದಿ ಕೊಲೆ ಎಂಬ ಸಂಶಯ ವ್ಯಕ್ತಪಡಿಸಿ ತನಿಖೆಗೆ ಒತ್ತಾಯಿಸಿದ್ದಾರೆ.
ಕಾಂಗ್ರೇಸ್ ನಾಯಕರು ಹಾಗೂ ಕಾರ್ಯಕರ್ತರು ಇದೊಂದು ಪೂರ್ವಯೋಜಿತ ಕೃತ್ಯವಾಗಿದ್ದು ವ್ಯವಸ್ಥಿತವಾದ ಕೊಲೆ ಎಂಬ ಸಂಶಯ ವ್ಯಕ್ತಪಡಿಸಿದ್ದಾರಲ್ಲದೆ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ಪದ್ಮನಾಭ ಸಾಮಂತ್ ಹತ್ತು ಮಕ್ಕಳಲ್ಲಿ ಕೊನೆಯವನು. ಒಟ್ಟು ಏಳು ಗಂಡು, ಮೂರು ಹೆಣ್ಣು ಮಕ್ಕಳು. ಕಾಂಗ್ರೇಸ್ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿದ್ದ ಸಾಮಂತ್ ಕಾಂಗ್ರೇಸ್ ಸಾಮಾಜಿಕ ಜಾಲತಾಣದ ಪ್ರಮುಖನಾಗಿಯೂ ಕರ್ತವ್ಯ ನಿರ್ವಹಿಸಿದ್ದು ಇತ್ತೀಚೆಗೆ ಜಿಲ್ಲಾ ಕಾಂಗ್ರೇಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷನಾಗಿದ್ದರು.
ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಸಾಮಂತ್ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಭೂಮಾಫಿಯದ ಕೆಂಗಣ್ಣಿಗೆ ಗುರಿಯಾಗಿದ್ದರು. ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಸಕ್ರಮ ಅವ್ಯವಹಾರ ಸೇರಿದಂತೆ ಹಲವು ಭ್ರಷ್ಟಾಚಾರ, ಅಕ್ರಮ, ಅವ್ಯವಹಾರ ಪ್ರಕರಣಗಳನ್ನು ಬಯಲಿಗೆಳೆದು ಕೇಸು, ಬೆದರಿಕೆ, ಹಲ್ಲೆಗಳನ್ನು ಎದುರಿಸಿದ್ದ ಸಾಮಂತ್ ದುಷ್ಟರಿಗೆ ಸಿಂಹಸ್ವಪ್ನನಾಗಿದ್ದರು. ಆರ್ ಟಿ ಐ ಕಾರ್ಯಕರ್ತನಾಗಿಯೂ ಹಲವು ಪ್ರಕರಣಗಳನ್ನು ಬಯಲಿಗೆಳೆದಿದ್ದರು.
ಇತ್ತೀಚೆಗೆ ಯುವಕನೊರ್ವನಿಂದ ಕೆಲಸಕ್ಕಾಗಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಪದ್ಮನಾಭ ಸಾಮಂತರ ಮೇಲೆ ಪ್ರಕರಣ ದಾಖಲಾಗಿತ್ತು.
ಯಾವುದಕ್ಕೂ ಹಿಂಜರಿಯದೆ, ಯಾರಿಗೂ ಹೆದರದೆ, ಸದಾ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದ ಪದ್ಮನಾಭ ಸಾಮಂತ್ ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಯಲ್ಲ ಎನ್ನುತ್ತಾರೆ ಮನೆಮಂದಿ ಮತ್ತು ಸ್ಥಳೀಯರು.
ಪುಂಜಾಲಕಟ್ಟೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಜನಪ್ರತಿನಿಧಿಗಳು, ಕಾಂಗ್ರೇಸ್ ನಾಯಕರು, ಕಾರ್ಯಕರ್ತರು, ಸಾರ್ವಜನಿಕರು ಆಗಮಿಸಿ ಸಂತಾಪ ಸೂಚಿಸಿದ್ದಾರೆ.